ಉಪಕರ್ಮ ಅಂದರೆ ಏನು ಯಾವಾಗ
Nannuru-team
8/2/2025

ಉಪಾಕರ್ಮ - ವೈಶ್ವಕರ್ಮಣ ಸಂಪ್ರದಾಯ : ಪ್ರತಿವರ್ಷವೂ ವೇದ-ಶಿಲ್ಪ ಸ್ವಾಧ್ಯಾಯ ಮಾಡುವವರು ಉಪಾಕರ್ಮ ಆಚರಿಸಬೇಕು. (ಅಂದರೆ ಪ್ರತಿವರ್ಷವೂ ಹೊಸದಾಗಿ ವೇದಾಧ್ಯಯನಾರಂಭ, ಶಿಲ್ಪಾಧ್ಯಯನಾರಂಭ ಮಾಡಲು ಉಪಕ್ರಮಿಸುವುದು ಎಂದರ್ಥ) ವರ್ಷಾಸು ಶ್ರವಣೇನ ಸ್ವಾಧ್ಯಾಯಾನುಪಾಕುರುತೇ|| (ಮನುಗೃಹ್ಯಸೂತ್ರ, 2-1-1) ಸರ್ವಾನ್ ವೇದಾನ್ ಸಾಂಗಾಂಶ್ಚ || (ಮನುಗೃಹ್ಯಸೂತ್ರ 2-1-9) ಸಕ್ರಿಯಾಂಗಂ ಶಿಲ್ಪಂ ಚ || (ಮನುಗೃಹ್ಯಸೂತ್ರ 2-1-10) ಎಂದು ಆದ್ಯಾಚಾರ್ಯರಾದ ಮನ್ವಾಚಾರ್ಯರು ಅಜ್ಞಾಪಿಸಿದ್ದಾರೆ. ಸಂಪ್ರಾಪ್ತೇ ಶ್ರಾವಣೇಮಾಸೇ ಪೌರ್ಣಮಾಸ್ಯಾಂ ಚ ವಿಷ್ಣುಭೇ | ಗುರುಃ ಕುರ್ಯಾದುಪಾಕರ್ಮ ಸಶಿಷ್ಯೈರ್ಬ್ರಹ್ಮಚಾರಿಭಿಃ || (ವಿಶ್ವಕರ್ಮಪುರಾಣ, 26-6) ಎಂದು ಧರ್ಮಸ್ಥಾಪನಾಚಾರ್ಯರಾದ ಶ್ರೀಕಾಳಹಸ್ತಾಚಾರ್ಯರು ಅಪ್ಪಣೆ ಕೊಡಿಸಿರುತ್ತಾರೆ. ಹಾಗಾಗಿ ಸಾರ್ವತ್ರಿಕವಾಗಿ ವರ್ಷಋತುವಿನ ಶ್ರಾವಣ ಮಾಸದ ಹುಣ್ಣಿಮೆಯಂದು ಶ್ರವಣನಕ್ಷತ್ರ ಇರುವಾಗ ಉಪಾಕರ್ಮ ಆಚರಿಸಬೇಕು. ಋಗುಪಾಕರ್ಮ, ಯಜುರುಪಾಕರ್ಮ ಮತ್ತು ಸಾಮಗೋಪಾಕರ್ಮ ಎಂಬ ಮೂರು ಉಪಾಕರ್ಮಗಳು ಪ್ರಸಿದ್ಧವಾಗಿವೆ. ಅವರವರ ಗೋತ್ರಗಳಿಗೆ ಸಂಬಂಧಿಸಿದ ವೇದಗಳಿಗೆ ಅನುಸಾರವಾಗಿ ಉಪಾಕರ್ಮ ಆಚರಿಸುವುದು ರೂಢಿಯಲ್ಲಿದೆ. ಸಾನಗ ಗೋತ್ರ - ಋಗ್ವೇದ, ಅಯಶ್ಶಿಲ್ಪ ಸನಾತನ ಗೋತ್ರ - ಕೃಷ್ಣಯಜುರ್ವೇದ, ಕಾಷ್ಠಶಿಲ್ಪ ಅಹಭೂನಸ ಗೋತ್ರ - ಸಾಮವೇದ, ಕಾಂಸ್ಯಶಿಲ್ಪ ಪ್ರತ್ನಸ ಗೋತ್ರ - ಅಥರ್ವವೇದ, ಶಿಲಾಶಿಲ್ಪ ಸುಪರ್ಣಸ ಗೋತ್ರ - ಪ್ರಣವವೇದ, ಸ್ವರ್ಣಶಿಲ್ಪ ಹೀಗೆ ಪಂಚಗೋತ್ರದವರು ಪಂಚವೇದಗಳನ್ನೂ, ಪಂಚಶಿಲ್ಪಗಳನ್ನೂ ರಕ್ಷಿಸಬೇಕೆಂದು, ವಿಂಗಡಿಸಿ, ಜವಾಬ್ದಾರಿ ನೀಡಿರುತ್ತಾರೆ. ಸಾನಗ ಮತ್ತು ಪ್ರತ್ನಸ ಗೋತ್ರದವರು ಋಗುಪಾಕರ್ಮವನ್ನು, ಸನಾತನ ಮತ್ತು ಸುಪರ್ಣಸ ಗೋತ್ರದವರು ಯಜುರುಪಾಕರ್ಮವನ್ನು, ಅಹಭೂನಸ ಗೋತ್ರದವರು ಸಾಮಗೋಪಾಕರ್ಮವನ್ನು, ಆಚರಿಸುವುದು ಶಾಸ್ತ್ರಸಮ್ಮತವಾಗಿರುತ್ತದೆ. ಅನಿವಾರ್ಯ ಪಕ್ಷದಲ್ಲಿ ಬೇರೆ ಗೋತ್ರದವರೊಂದಿಗೆ ಉಪಾಕರ್ಮ ಆಚರಿಸಿದಲ್ಲಿ ದೋಷವೇನಿಲ್ಲ. –ನಾ.ನಿರಂಜನಾಚಾರ್ಯ, 31-7-2025. 2025 ನೇ ಸಾಲಿನ ಉಪಾಕರ್ಮಗಳು ಹೀಗಿವೆ, 9-8-2025, ಶನಿವಾರ, ಋಗುಪಾಕರ್ಮ 9-8-2025, ಶನಿವಾರ, ಯಜುರುಪಾಕರ್ಮ 26-8-2025, ಮಂಗಳವಾರ, ಸಾಮಗೋಪಾಕರ್ಮ




