ವಿಶ್ವಕರ್ಮರ ಅಭಿವೃದ್ಧಿಗೆ ನಿಗಮವನ್ನು ಸೇವಾ ವೇದಿಕೆಯಾಗಿ ಬಳಸುತ್ತೇನೆ: ಸುಜ್ಞಾನಮೂರ್ತಿ
Unknown Author
10/21/2025

ಹಾಸನ: ಸರಕಾರ ನೀಡುತ್ತಿರುವ ನಿಗಮದ ಸಾಲ ಯೋಜನೆ, ವಿದ್ಯಾರ್ಥಿವೇತನ ಮತ್ತು ತರಬೇತಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಸುಜ್ಞಾನಮೂರ್ತಿ ಪುಟ್ಟಾಚಾರ್ ಹೇಳಿದರು. ನಗರದ ಶ್ರಿ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಸೋಮವಾರ ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿಶ್ವಕರ್ಮರು ಈ ದೇಶದ ಶಿಲ್ಪಶಕ್ತಿ, ತಾಂತ್ರಿಕ ಜ್ಞಾನ ಮತ್ತು ಕೌಶಲ್ಯದ ಜೀವಂತ ರೂಪ. ಸಮಾಜದ ಅಸ್ತಿತ್ವ, ಸಂಸ್ಕೃತಿ ಮತ್ತು ಅಭಿವೃದ್ಧಿಗೆ ವಿಶ್ವಕರ್ಮ ಸಮುದಾಯದ ಕೊಡುಗೆ ಅನನ್ಯ ಎಂದರು. ಆದರೆ ಇಂದು ಸಮಾಜದ ಬಹುಭಾಗವು ಶಿಕ್ಷಣ ಹಾಗೂ ಉದ್ಯೋಗದ ಅಭಾವದಿಂದ ಹಿಂದುಳಿದಿದೆ. ಇದರ ನಿವಾರಣೆಗೆ ನಿಗಮದ ಮೂಲಕ ಪ್ರತಿ ತಾಲೂಕಿನಲ್ಲಿ ತರಬೇತಿ ಕೇಂದ್ರಗಳು, ಉದ್ಯೋಗೋತ್ಪಾದಕ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುವುದು ಎಂದರು. ಯುವಕರು ತಾಂತ್ರಿಕ ವಿದ್ಯಾಭ್ಯಾಸದತ್ತ ಹೆಚ್ಚು ಒಲವು ತೋರಬೇಕು. ನನ್ನ ನೇತೃತ್ವದಲ್ಲಿ ನಿಗಮವು ಕಚೇರಿಯ ಕಾಗದಗಳಲ್ಲಿ ಸೀಮಿತವಾಗದೇ, ಜನರ ಬಾಗಿಲಿಗೆ ತಲುಪುವ ರೀತಿಯಲ್ಲಿ ಸಾಮಾಜಿಕ ತಾಣಗಳನ್ನು ಬಳಸಿ ಕೆಲಸ ಮಾಡಲಿದೆ ಮತ್ತು ಸಮುದಾಯದ ಅಭಿವೃದ್ಧಿಗೆ ನಿಗಮವನ್ನು ಸೇವಾ ವೇದಿಕೆಯಾಗಿ ಬಳಸುತ್ತೇನೆ ಎಂದು ಭರವಸೆ ನೀಡಿದರು. ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಹೆಚ್.ವಿ. ಹರೀಶ್ ಮಾತನಾಡಿ, ಸಮುದಾಯದ ಏಕತೆ ಮತ್ತು ಸಹಕಾರದಿಂದ ನಿಗಮದ ಗುರಿ ಸಾಧನೆ ಸಾಧ್ಯ, ಶಿಲ್ಪಕಲೆಯ ಮೂಲಕ ಪ್ರವಾಸೋದ್ಯಮಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿ ಜಿಲ್ಲೆಯ ಕೀರ್ತಿ ಪತಾಕೆಯು ವಿಶ್ವಕ್ಕೆ ಪಸರಿಸಲು ಕಾರಣೀಭೂತರಾದ ಅಮರಶಿಲ್ಪಿ ಜಕಣಾಚಾರ್ಯರ ಸ್ಮಾರಕವನ್ನು ಬೇಲೂರು -ಹಳೇಬೀಡು ಸಂಧಿಸುವ ಹಾಸನದ ರಸ್ತೆಯಲ್ಲಿ ನಿರ್ಮಾಣಕ್ಕೆ ಕ್ರಮವಹಿಸಬೇಕೆಂದು ಮನವಿ ಮಾಡಿದರು. ಮೊದಲಿಗೆ ಕಲಾವತಿ ಅನಿಲ್ ಪ್ರಾರ್ಥಿಸಿದರು. ಖಜಾಂಚಿ ಜಗದೀಶ್ ಸ್ವಾಗತಿಸಿದರು. ಉಪಾಧ್ಯಕ್ಷ ಕೆ. ವಿ. ಯೋಗೇಶ್ ವಂದಿಸಿದರು. ನಿರ್ದೇಶಕ ಜಿ. ಎಸ್. ಜಯರಾಜ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಮಾಜದ ಪ್ರಮುಖರಾದ ಕನ್ನಡ ಸೋಮು, ರಾಜ್ಯ ಉಪಾಧ್ಯಕ್ಷ ಕುಮಾರ್, ವಾಸುದೇವ್, ಜಿಲ್ಲಾ ಉಪಾಧ್ಯಕ್ಷ ಎ. ಸಿ. ನಾರಾಯಣ, ಹೊಳೆನರಸೀಪುರ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ. ಹೆಚ್. ಗಂಗಾಧರಾಚಾರ್, ಕಾಳಿಕಾಂಬ ದೇವಾಲಯದ ಪೂಜಾ ಸಮಿತಿ ಅಧ್ಯಕ್ಷ ಹೆಚ್. ಕೆ. ಆನಂದ್, ತಾಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಬ್ಯಾಟರಂಗಾಚಾರ್, ಖಜಾಂಚಿ ಲೋಕೇಶ್, ಸಮಾಜದ ಪ್ರಮುಖರಾದ ಶಿವಶಂಕರ್, ಹೆಚ್. ಎಸ್. ಆನಂದ್, ಶ್ರೀನಿವಾಸ್ ಮತ್ತು ಸುರೇಶ್ ಸೇರಿದಂತೆ ವಿವಿಧ ವಿಶ್ವಕರ್ಮ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಮಾಜಬಾಂಧವರು ಹಾಜರಿದ್ದರು.



