ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೊದು ಹೇಗೆ..?

Nannuru-team

Nannuru-team

8/3/2025

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ  ಮರೆಯೊದು ಹೇಗೆ..?

ಅಜ್ಜಿಯೊಂದಿಗಿನ ಬಾಲ್ಯದ ನೆನಪುಗಳನ್ನ ಮರೆಯೋದು ಹೇಗೆ..? ಅಜ್ಜಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಜ್ಜಿ ಕತೆಗಳು, ಅವಳ ಅನುಭವದ ಘಟನೆಗಳನ್ನು ರಸವತ್ತಾಗಿ ಹೇಳುತಿದ್ದರೆ ಕೇಳೋ ಕಿವಿಗಳು ತಂಪೋ ತಂಪು. ಟಿವಿ, ಮೊಬೈಲ್ ಇವೆಲ್ಲ ಅಜ್ಜಿ ಹೇಳೋ ಕತೆ ಮುಂದೆ ದೂರನೇ ಬಿಡಿ. ನನ್ನ ಅಜ್ಜಿೊಂದಿಗೆ ಕಳೆದ ಸಮಯ ಕಡಿಮೆ, ಯಾಕೆಂದರೆ ಅವಳೊಂದಿಗೆ ನಾನು ಇನ್ನಷ್ಟು ಸಮಯ ಇರಲು ಆ ದೇವರು ಅವಕಾಶ ಕೊಡಲಿಲ್ಲ. ಹಾಗಾಗಿ ಬೇಗ ಕರಿದು ಬಿಟ್ಟ. ಆ ಕರೆಗೆ ಓಗೊಟ್ಟು ಅವಳು ಹೋದಳು. ನನ್ನ ಅಜ್ಜಿ ನನ್ನ ಬಾಲ್ಯದಲ್ಲಿ ಮಿನುಗಿ ಹೋದವಳು, ಆಗಾಗ ನೆನಪಿನ ತೆಕ್ಕೆಯಲಿ ಮರಳಿ ಬಂದವಳು. ಅಜ್ಜಿಗೆ ಮೊಮ್ಮಕ್ಕಳ ಮೇಲೆ ಅಷ್ಟೇ ಕಾಳಜಿ ಕೂಡ, ಆದರೆ ಆ ವಯಸ್ಸಿನಲ್ಲಿ ಅರಿಯದ ನಾವು ಅವಳ ದೋಷಿಸಿದ್ದೆ ಹೆಚ್ಚು. ನನ್ನ ಅಜ್ಜಿ ಮನೆ ಮುಂದೆ ಒಂದು ಆಲದ ಮರವಿತ್ತು. ಆ ಆಲದ ಮರದ ಬಿಳುವಿನಲ್ಲಿ ಜೋಕಾಲಿ ಆಡೋಕೆ ನಾವು ಸದಾ ಸಿದ್ಧವೇ. ಆದರೆ ರಸ್ತೆಯ ಪಕ್ಕದಲ್ಲಿ ಇದ್ದುದರಿಂದ ವಾಹನಗಳ ಓಡಾಟ ಹೆಚ್ಚು. ಅಜ್ಜಿ ನಾವು ಎಲ್ಲಿ ರಸ್ತೆಗೆ ಬೀಳುತ್ತೇವೋ ಎಂಬುದಕ್ಕೆ ಕಾಳಜಿಯಿಂದ ಕುಡುಗೊಲು ತಂದು ಅವುಗಳ ಕಡಿಯುವುದೇ ರೂಡಿಮಾಡಿಕೊಂಡಳು. ನಾವು ಮತ್ತೆ ಚಿಗುರು ನೋಡಿ ಖುಷಿಪಟ್ಟರೂ, ಅಜ್ಜಿಗೆ ಅವುಗಳ ನಿರ್ನಾಮ ಮಾಡುವುದೇ ಕೆಲಸವಾಗಿತ್ತು. ಆದರೆ ಈಗ ಆಲದ ಮರವಿದೆ, ಆದರೆ ನನ್ನ ಅಜ್ಜಿ ಇಲ್ಲ. ಅಜ್ಜಿಗೆ ಎಲೆ ಅಡಿಕೆ ಅಂದರೆ ಪ್ರಾಣ. ಅಡಿಕೆ ಕುಟ್ಟಿ ಪುಡಿ ಮಾಡಿ, ಹದವಾಗಿ ಎಲೆ, ಸುಣ್ಣ ಬೆರೆಸಿ ಬಾಯನ್ನು ಕೆಂಪಾಗಿಸಿಕೊಳ್ಳಲಿ, ಅವಳು ನವ ಉತ್ಸಾಹಿ. ಕೆಂಪಾದ ಬಾಯಿ ಒರೆಸಿದ ಕರವಸ್ತ್ರ ತೊಳೆಯುವ ಕಾರ್ಯವೊಬ್ಬಬ್ಬರಿಗೆ ವಹಿಸಿಬಿಡುತ್ತಿದ್ದಳು. ಅದು ಅಲ್ಲದೆ ಯಾವುದೇ ಕೆಲಸ ಅಪೂರ್ಣವಾಗಬಾರದು. ಅವಳು ಹೇಳುವ ಕೆಲಸಗಳಿಂದ ತಪ್ಪಿಸಿಕೊಂಡು ಓಡಿದ್ದೆ ಹೆಚ್ಚು. ಅಜ್ಜಿ ಅಜ್ಜನೊಡನೆ ಜಗಳಕ್ಕಿಳಿದರೆ ಸಾಕು, ಅಜ್ಜ ಕೊನೆಗೂ ಸೋತು ಮಾತು ನಿಲ್ಲಿಸಿಬಿಡುತಿದ್ದ. ಅಜ್ಜಿ ಮಹಾನ್ ಬಜಾರಿ ಅಂದುಕೊಳ್ಳುತಿದ್ದ ನಾವು, ಅಜ್ಜನ ತಪ್ಪು ಅಜ್ಜಿಗೆ ಕಂಡದ್ದು ನಮಗೆ ಕಾಣಿಸಲಿಲ್ಲ. ಇನ್ನೂ ಅಜ್ಜಿ ಮಾಡಿದ ಅಡುಗೆ — ರಸವತ್ತಾದ ಭೋಜನವೇ. ಅಜ್ಜಿ ಬೆಳಗ್ಗೆನೇ ನಮ್ಮನೆಬ್ಬಿಸಿ ಒಂದು ಬ್ಯಾಗ್ ಹಿಡಿದು ಮಾವಿನ ಹಣ್ಣನ್ನು ಹೆರೆಕಿ ತಂದು ಮಾಡಿದ ಮಾವಿನಹಣ್ಣಿನ ಸಾಂಬಾರ್ ಈಗಲೂ ಅಜ್ಜಿಯ ನೆನಪಾದಾಗಲೆಲ್ಲ ಕೈ ರುಚಿ ಘಮಗುಗುಡುತ್ತದೆ. ಅವಳ ಅರ್ಧ ನೆರೆತ ತಲೆ ಕೂದಲಿಗೆ ಎಣ್ಣೆ ತಾಕಿಸಿದಾಗಲೆಲ್ಲ “ತಲೆ ಕಡಿತ ಏನಾದ್ರು (ಹೇನು) ಇರಬಹುದು ನೋಡು” ಎಂದು ಪೀಡಿಸುತ್ತಿದ್ದಳು. ಎಲ್ಲೂ ಇರದ ಹೇನನ್ನು ಎಲ್ಲಿ ಹುಡುಕಿ ತರುವುದು? ನಮ್ಮ ಅಕ್ಕ ಅಜ್ಜಿಯ ಕಾಟ ತಾಳಲಾರದೆ ಬೇಲಿಯ ಕಡ್ಡಿ ತಂದು ಕೂದಲ ಪಕ್ಕ ‘ಪಟ್’ ಎನಿಸಿ ಅಜ್ಜಿಯ ಖುಷಿಪಡಿಸುತ್ತಿದ್ದಳು. ಅಂದು ಅಜ್ಜಿಯಿಂದ ಅವಳಿಗೆ ಹೊಗಳಿಕೆಯ ಸನ್ಮಾನವೇ. ಅಜ್ಜಿಯ ಎದುರು ಕಾಗೆಯು ಕೊಡ ಧ್ವನಿ ಎತ್ತುವ ಹಾಗಿಲ್ಲ. ಧ್ವನಿ ಎತ್ತಿದರೆ ಕಾಗೆಯ ಹುಡುಕಿ ಅದರ ಮುಖಕ್ಕೆ ಕನ್ನಡಿ ಹಿಡಿದು ಓಡಿಸುವ ಸರದಿ ನನ್ನದು. ಸಂಜೆ ಸಮಯದಲ್ಲಿ ಅಜ್ಜಿ ಬೆಲ್ಲದ ಕಾಫಿ ಕಾಯಿಸಿ ನಮ್ಮನ್ನೆಲ್ಲ ಕರೆದು, ಜೊತೆಗೆ ತಿನ್ನಲು ಏನಾದರೂ ಕೊಡುತ್ತಿದ್ದಳು (ಕಡ್ಲೆ ಪುರಿ). ನಾವು ಸಾಲಾಗಿ ನಿಂತು ಅಂಗಿಯ ಮೇಲೆ ಹಾಕಿಸಿಕೊಂಡು ಕಾಫಿ ಜೊತೆಗೆ ಸವಿದರೆ, ಅಜ್ಜಿಯ ಕೈ ರುಚಿ ಅಲ್ಲೂ ಬೆರೆತಂತೆ. ಅಜ್ಜಿಯೊಂದಿಗೆ ಇರುವಷ್ಟು ದಿನವೂ ಬೈಗುಳ ತಿನ್ನದ ದಿನವಿಲ್ಲ. ಮತ್ತೆ ನಮಗೆ ನಾವೇ ಪ್ರಶ್ನೆ — “ಈ ಮುದುಕಿ ಯಾಕೆ ಹೀಗೆ?” ಅಜ್ಜಿ ಇರುವಷ್ಟು ದಿನ ಹಬ್ಬ ಬಂತೆಂದರೆ ಸಾಕು, ಅಜ್ಜಿಯ ಹೆಣ್ಣು ಮಕ್ಕಳು, ಗಂಡುಮಕ್ಕಳು, ಮೊಮ್ಮಕ್ಕಳು ಎಲ್ಲರೂ ಒಂದೇ ಕಡೆ. ಮನೆಯ ವಾತಾವರಣ ಹಬ್ಬದ ಕಳೆಯ ಇನ್ನೂ ಹೆಚ್ಚಿಸುತ್ತಿತ್ತು. ಎಲ್ಲರೂ ಸೇರಿ ಮಾಡಿದ ಊಟ, ಆಡಿದ ಚೌಕಬಾರ, ಅನೇಕ ಆಟ — ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಒಂದು ದುಃಖದ ಸಂದರ್ಭದಲ್ಲಿ ಮತ್ತೆ ನಾವೆಲ್ಲಾ ಒಂದಾಗಬೇಕಾದ ಪರಿಸ್ಥಿತಿ ಬಂದಿದೆ. ಅಜ್ಜಿಗೆ ಅನಾರೋಗ್ಯ ಕಾಡಿಸಿತು. ಅಜ್ಜಿ ಮಲಗಿಯೇ ಇರುತ್ತಿದ್ದಳು. ಅವಳಲ್ಲಿದ್ದ ಚಲನೆ ಅಂದು ಇರಲಿಲ್ಲ. ಅಜ್ಜಿ ಸಾಯುವ ಒಂದು ದಿನದ ಹಿಂದಿನ ದಿನ ನನ್ನನ್ನು ಕರೆದು ತಲೆ ನೇವರಿಸಿದಳು. ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಯಾವತ್ತೂ ತೋರದ ವಿಶೇಷ ವಾತ್ಸಲ್ಯವ ತೋರಿದಳು. ಅಂದು ಅವಳು ಕೇಳಿದ ಪ್ರಶ್ನೆಗೆ ಇಂದು ಉತ್ತರಿಸಬಹುದಿತ್ತೇನೊ — “ಅವ್ವ ಮಗ, ನಾನ್ ಸತ್ರೆ ಏನ್ ಮಾಡ್ತೀರಾ?” ಅಜ್ಜಿ ಯಾಕೆ ಹೀಗೆ ಕೇಳ್ತಾ ಇದ್ದಾಳೆ ಎಂದು ಅರಿಯಲು ಬಾರದ ನಾನು, ಆ ಪ್ರಶ್ನೆ ಕೇಳಿದಾಗ ನನ್ನ ಮನಸಿನಲ್ಲಿ ಓಡುತ್ತಿತ್ತು — “ಇಷ್ಟೇ ಹೌದು, ಸತ್ರೆ ಏನ್ ಮಾಡ್ತಾರೆ? ಗುಂಡಿ ತೋಡಿ ಮಣ್ಣು ಮುಚ್ಚುತ್ತಾರೆ, ಇಲ್ಲ ಅಂದ್ರೆ ಸುಡುತ್ತಾರೆ.” ಸತ್ತ ಬಳಿಕ ಎಲ್ಲರನ್ನೂ ಏನು ಮಾಡುತ್ತಾರೆಂದು ಯೋಚಿಸುತ್ತಿದ್ದೆ, ಅಜ್ಜಿಯ ಪ್ರಶ್ನೆಯ ಕಡೆ ಗಮನವೇ ಹೋಗಲಿಲ್ಲ. ಮಾರನೇ ದಿನ ಅಜ್ಜಿ ನಮ್ಮನಗಳಿದಳು. ಅಜ್ಜಿ ಎಷ್ಟೇ ಬೈದರೂ ಅಷ್ಟೇ ಪ್ರೀತಿಸುತ್ತಿದ್ದ ನನ್ನಿಗೆ ಕಣ್ಣೀರು ಬರುತ್ತಿಲ್ಲ. ಗಂಟಲಲ್ಲಿ ಏನೋ ಸಿಕ್ಕಿಕೊಂಡ ಹಾಗೆ, ಅವಳನ್ನೇ ನೋಡುತ್ತಾ ನಿಂತುಬಿಟ್ಟೆ. ಅಜ್ಜಿ ಯಾಕೆ ಆ ಪ್ರಶ್ನೆ ಕೇಳಿದಳು ಎಂಬುದು ಆಗ ಅರ್ಥ ಆಯಿತು. ಅಜ್ಜಿಯ ನೆನಪು ಹಾಗೇ ಉಳಿಯಿತು. ಅವಳು ಮರೆಯಾದಳು — ಮರೆಯಲಾಗದ ನೆನಪು ಮರೆಸದೆ ಹೋದಳು. ✍ ಭೂಮಿಗೌರಿ ಶನಿವಾರಸಂತೆ